ಸಂಡೂರು
	ಭಾರತದ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಹೊಸಪೇಟೆ ತಾಲ್ಲೂಕು, ಪೂರ್ವದಲ್ಲಿ ಬಳ್ಳಾರಿ ತಾಲ್ಲೂಕು ಮತ್ತು ಆಂಧ್ರಪ್ರದೇಶ, ಆಗ್ನೇಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನೈಋತ್ಯ ಮತ್ತು ದಕ್ಷಿಣದಲ್ಲಿ ಕೂಡ್ಲಿಗಿ, ಪಶ್ಚಿಮದಲ್ಲಿ ಹೊಸಪೇಟೆ ತಾಲ್ಲೂಕು ಸುತ್ತುವರಿದಿವೆ. ತೋರಣಗಲ್ಲು, ಸಂಡೂರು, ಚೋರನೂರು-ಇವು ಹೋಬಳಿಗಳು. ತಾಲ್ಲೂಕಿನಲ್ಲಿ 89 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 943.6 ಚ.ಕಿಮೀ. ಜನಸಂಖ್ಯೆ 1,91,159.

	ಈ ತಾಲ್ಲೂಕಿನ ಸಂಡೂರು ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿ ಯಿಂದ ಕೂಡಿದ ಚೇತೋಹಾರಿ ನಿಸರ್ಗಸೌಂದರ್ಯದಿಂದ ಹಾಗೂ ಅಲ್ಲಿನ ಖನಿಜಸಂಪತ್ತಿನಿಂದ ಪ್ರಸಿದ್ಧವಾಗಿವೆ. ಸಂಡೂರು ಬೆಟ್ಟಸಾಲು ಮಲ್ಲಾಪುರಂ ಬಳಿ ತುಂಗಭದ್ರಾ ನದಿ ದಂಡೆಯಿಂದ ಆಗ್ನೇಯದ ಕಡೆಗೆ ಸು. 48 ಕಿಮೀ ದೂರ ಹಬ್ಬಿದೆ. ಈ ಬೆಟ್ಟ ಸಾಲಿನ ನಡುವೆ ನಾರಿಹಳ್ಳದ ಎರಡು ಕಮರಿಗಳಿವೆ. ಈ ಶ್ರೇಣಿಯ ದಕ್ಷಿಣ ಭಾಗದಲ್ಲಿರುವ ಕುಮಾರಸ್ವಾಮಿ ಬೆಟ್ಟದ ಎತ್ತರ 1,036 ಮೀ. ಮಧ್ಯದಲ್ಲಿರುವ ರಾಮನ ಮಲೈ 992 ಮೀ ಇದ್ದು ಉತ್ತರದಲ್ಲಿರುವ ಜಂಬುನಾಥ ಶಿಖರ 908 ಮೀ ಎತ್ತರವಿದೆ. ಸಂಡೂರು ಬೆಟ್ಟಸಾಲಿನ ಪೂರ್ವಕ್ಕೆ ಹಬ್ಬಿರುವ ಸುಗ್ಗಮಹಾದೇವಿ ಬೆಟ್ಟ ಅಥವಾ ತಾಮ್ರಪರ್ವತ ಶ್ರೇಣಿ ದರೋಜಿ ಕೆರೆಯವರೆಗೂ ಸುಮಾರು 42 ಕಿಮೀ ಉದ್ದಕ್ಕೆ ವ್ಯಾಪಿಸಿದೆ. ಈ ತಾಲ್ಲೂಕಿನ ಚೋರನೂರಿನ ಬಳಿ ಗುಡಿಕೋಟೆ ಶ್ರೇಣಿ ಪ್ರಾರಂಭವಾಗಿ ಮುಂದೆ ಕೂಡ್ಲಿಗಿ ತಾಲ್ಲೂಕಿನ ಗುಡಿಕೋಟೆದುರ್ಗದ ಉತ್ತರಕ್ಕೆ ಸಾಗುವುದು.

	ಈ ತಾಲ್ಲೂಕಿನಲ್ಲಿ ಹರಿಯುವ ತೊರೆಗಳಲ್ಲಿ ನಾರಿಹಳ್ಳ ಮುಖ್ಯ ವಾದದ್ದು. ಇದು ತಾಲ್ಲೂಕಿನ ಓಬಳಗಂಡಿ ಮತ್ತು ಭೀಮಗಂಡಿ ಕಮರಿಗಳಲ್ಲಿ ಸಂಡೂರು ಮುಖಾಂತರ ಹರಿಯುವುದು. ಈ ಕಮರಿಗಳ ಪ್ರಕೃತಿ ದೃಶ್ಯ ಸುಂದರವಾದದ್ದು. 1541ರ ಒಂದು ಶಾಸನದಲ್ಲಿ ಈ ತೊರೆಯನ್ನು ನಾರಾಯಣ್ ಎಂದು ಕರೆದಿದೆ. ತೋರಣಗಲ್ಲು ಹೋಬಳಿಯಲ್ಲಿ ಈ ತೊರೆಗೆ ಅಡ್ಡಕಟ್ಟೆ ಕಟ್ಟಿ ದರೋಜಿ ಕೆರೆ ನಿರ್ಮಿಸಲಾಗಿದೆ. ಇಡೀ ಜಿಲ್ಲೆ ಮತ್ತು ತಾಲ್ಲೂಕಿಗೇ ಇದು ದೊಡ್ಡಕೆರೆ. ಅನಂತರ ಈ ತೊರೆ ಉತ್ತರಾಭಿಮುಖವಾಗಿ ತುಂಗಭದ್ರಾ ನದಿಯೆಡೆಗೆ ಹರಿಯುವುದು. ಇದನ್ನು ಬಿಟ್ಟರೆ ಸಂಡೂರು ಬೆಟ್ಟಗಳ ಪಶ್ಚಿಮದ ಕಡೆ ಬೆಟ್ಟಗಳ ಮಗ್ಗುಲಲ್ಲಿ ಹರಿಯುವ ಗೌರಿಪುರ ತೊರೆಯನ್ನು ಹೆಸರಿಸಬಹುದು. ತುಂಗಭದ್ರಾ ನಾಲೆಯ ನೀರು ತಾಲ್ಲೂಕಿನ ಉತ್ತರದಲ್ಲಿ ಬಳಕೆಯಾಗುತ್ತದೆ. ಜಿಲ್ಲೆಯಲ್ಲೆ ಹೆಚ್ಚು ಅರಣ್ಯಪ್ರದೇಶವಿರುವ ಈ ತಾಲ್ಲೂಕಿನಲ್ಲಿ ಹುಣಿಸೆ, ಬೇವು, ಮಾವು, ಕಕ್ಕೆ, ತಂಗಡಿ, ಹೊನ್ನೆ, ಸೀತಾಫಲ, ಕಮಾರ, ದಿಂಡಿಗ, ಹರಗಲು ಮುಂತಾದ ಮರಗಳುಳ್ಳ ಎಲೆ ಉದುರುವ ಕಾಡುಗಳನ್ನೂ ಜೊತೆಗೆ ಶ್ರೀಗಂಧ ಮತ್ತು ಬೀಟೆಯಂಥ ಬೆಲೆಬಾಳುವ ಮರಗಳುಳ್ಳ ಕಾಡುಗಳನ್ನೂ ಕಾಣಬಹುದು. ಸಂಡೂರಿನ ದಟ್ಟ ಅರಣ್ಯಪ್ರದೇಶಗಳಲ್ಲಿ ಹಿಂದೆ ಹುಲಿಗಳಿದ್ದವು. ಈಗ ಸಾಮಾನ್ಯವಾದ ಇತರ ಕಾಡುಪ್ರಾಣಿಗಳನ್ನು ಇಲ್ಲಿ ಕಾಣಬಹುದು. ಹಸುರು ತುಂಬಿದ ಬೆಟ್ಟ, ಕಮರಿ ಕಾಡುಗಳ ಈ ತಾಲ್ಲೂಕಿನ ವಾಯುಗುಣ ಸಾಮಾನ್ಯವಾಗಿ ತಂಪಾಗಿದ್ದರೂ ವರ್ಷದಲ್ಲಿ ಹೆಚ್ಚುಕಾಲ ಒಣ ಹವೆ ಇರುತ್ತದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 829.2 ಮಿಮೀ.

	ಈ ತಾಲ್ಲೂಕಿನಲ್ಲಿ ಮರಳು ಮಿಶ್ರಿತ ಕೆಂಪುಜೇಡಿ ಮತ್ತು ಫಲವತ್ತಾದ ಜೇಡಿಮಣ್ಣಿರುವ ಪ್ರದೇಶವಿದ್ದು ಜೋಳ, ಬತ್ತ, ಸೇಂಗಾ, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ ಕೆಲಬಗೆಯ ಹಣ್ಣುಗಳನ್ನು ಬೆಳೆಯುತ್ತಾರೆ.  ಪಶುಪಾಲನೆ ಹಾಗೂ ಮತ್ಸ್ಯೋದ್ಯಮವಿದ್ದು ಅವುಗಳ ಬೆಳೆವಣಿಗೆ ಮತ್ತು ವಿಸ್ತರಣೆಗೆ ಗಮನ ನೀಡಲಾಗುತ್ತಿದೆ.

	ಈ ತಾಲ್ಲೂಕಿನಲ್ಲಿ ಗಣಿ ಉದ್ಯಮ ಮುಖ್ಯವಾದದ್ದು. ಸಂಡೂರಿನ ಪೂರ್ವ ಮತ್ತು ಪಶ್ಚಿಮದಲ್ಲಿ ಸಮಾನಾಂತರವಾಗಿ ಹಬ್ಬಿರುವ ಇಲ್ಲಿನ ಬೆಟ್ಟಶ್ರೇಣಿಗಳು ಖನಿಜಗಳ ಆಕರವಾಗಿವೆ. ಇವುಗಳಲ್ಲಿ ದೋಣಿಮಲೈ, ರಾಮನದುರ್ಗ, ಕುಮಾರಸ್ವಾಮಿ ಬೆಟ್ಟ ಮುಂತಾದವನ್ನು ಹೆಸರಿಸಬಹುದು. ರಾಮನದುರ್ಗ ಮತ್ತು ದೋಣಿಮಲೈ ಶ್ರೇಣಿಯಲ್ಲಿ ಹೆಚ್ಚು ಪ್ರಮಾಣದ ಕಬ್ಬಿಣದ ಅದುರು ನಿಕ್ಷೇಪಗಳಿವೆ. ಇಲ್ಲಿ ಮ್ಯಾಂಗನೀಸ್ ಅದುರನ್ನು ಹೊರತೆಗೆಯಲಾಗುತ್ತಿದೆ.	      

        (ಎಮ್.ಎನ್.ಎಮ್.)

	ಬಳ್ಳಾರಿ-ಹೊಸಪೇಟೆ ಬ್ರಾಡ್‍ಗೇಜ್ ರೈಲುಮಾರ್ಗ ಈ ತಾಲ್ಲೂಕಿನ ಉತ್ತರದಲ್ಲಿ ಸ್ವಲ್ಪದೂರ ಹಾದುಹೋಗಿದೆ. ಇದರ ಜೊತೆಗೆ ಮೀಟರ್ ಗೇಜ್ ರೈಲುಮಾರ್ಗವೂ ಈ ತಾಲ್ಲೂಕಿನಲ್ಲಿದೆ.

	ಸಂಡೂರಿನ ದಕ್ಷಿಣಕ್ಕೆ ಸು.48 ಕಿಮೀ ದೂರದಲ್ಲಿರುವ ಬೊಮ್ಮಗಟ್ಟ ಒಂದು ಸಾಮಾನ್ಯ ಗ್ರಾಮವಾದರೂ ಇಲ್ಲಿರುವ ಹಳೆಯ ಹುಲಿಕುಂಟಿ ರಾಯ (ಆಂಜನೇಯಸ್ವಾಮಿ) ದೇವಾಲಯ ಪ್ರಸಿದ್ಧವಾದದ್ದು. ಸಂಡೂರಿನ ಈಶಾನ್ಯಕ್ಕೆ ಸು.48 ಕಿಮೀ ದೂರದಲ್ಲೂ ತೋರಣಗಲ್ಲಿನ ಉತ್ತರಕ್ಕೆ ಸು.28 ಕಿಮೀ ದೂರದಲ್ಲೂ ಇರುವ ದರೋಜಿ ಗ್ರಾಮ ಅದರ ಬಳಿ ಕಟ್ಟಿರುವ ದರೋಜಿ ಕೆರೆಯಿಂದ ಪ್ರಸಿದ್ಧ. ಈ ಕೆರೆ ಟಿಪ್ಪು ಕಟ್ಟಿಸಿದ್ದೆಂದು ಪ್ರತೀತಿ. ಇಲ್ಲಿ ನಾರಿಹಳ್ಳಕ್ಕೆ ಸು.4 ಕಿಮೀ ಉದ್ದದ ಅಣೆಕಟ್ಟೆ ಕಟ್ಟಲಾಗಿದೆ. 1851ರ ಮೇ ತಿಂಗಳಲ್ಲಿ ಕೆರೆ ಏರಿಯಲ್ಲಿ ಬಿರುಕುಂಟಾಗಿ ನೀರು ನುಗ್ಗಿ ಹಳೆಯ ದರೋಜಿ ಗ್ರಾಮ ನಾಶವಾಯಿತು. ಅನಂತರ ಈಗಿನ ಹೊಸ ದರೋಜಿ ಗ್ರಾಮದ ನಿರ್ಮಾಣವಾಯಿತು. ಈ ಕೆರೆಯ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳುತ್ತಾರೆ. ಕೆರೆಯಲ್ಲಿ ಮೀನು ಸಾಕಣೆ ಇದೆ. ಸಂಡೂರಿನ ಆಗ್ನೇಯಕ್ಕೆ ಸು. 28 ಕಿಮೀ ದೂರದಲ್ಲಿರುವ ದೇವಗಿರಿ ಗ್ರಾಮ ದೇವಗಿರಿ ಬೆಟ್ಟದಮೇಲಿದೆ. ಈ ಪ್ರದೇಶದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಹೇರಳವಾಗಿ ದೊರಕುವುದರಿಂದ ಇಲ್ಲಿ ಮ್ಯಾಂಗನೀಸ್ ಅದುರನ್ನು ಹೊರತೆಗೆಯಲಾಗುತ್ತಿದೆ. ಸಂಡೂರಿನ ವಾಯವ್ಯಕ್ಕೆ ಸು. 16 ಕಿಮೀ ದೂರದಲ್ಲಿರುವ ರಾಮನದುರ್ಗ ಒಂದು ಗಿರಿಧಾಮ. ಇಲ್ಲೊಂದು ಹಳೆಯ ಕೋಟೆಯ ಅವಶೇಷವಿದೆ. ಇದನ್ನು ಕಂಪಿಲಿಯ ಕುಮಾರರಾಮ ಕಟ್ಟಿಸಿದನೆಂದು ಪ್ರತೀತಿ. ಇಲ್ಲೊಂದು ರಾಮ ದೇವಾಲಯವಿದೆ. ಸಿಕ್ಕಿರುವ ಶಾಸನದ ಪ್ರಕಾರ ಈ ದೇವಾಲಯ ವನ್ನು ಕುಮಾರರಾಮನ ನೆನಪಿಗಾಗಿ ಕಟ್ಟಿಸಿದುದೆಂದು ತಿಳಿದುಬರುವುದು.  ಬೆಟ್ಟದ ಮೇಲೊಂದು ಭೂಮಾಪನ ಕೇಂದ್ರವಿದೆ. ಬೆಟ್ಟದ ಮೇಲಿನಿಂದ ಸಂಡೂರು ಕಣಿವೆಯ ಸುಂದರ ದೃಶ್ಯವನ್ನು ಕಾಣಬಹುದು. ಇಲ್ಲಿ ಮಾವಿನ ತೋಪುಗಳು ಜನರ ಮನಸ್ಸನ್ನು ಆಕರ್ಷಿಸುತ್ತವೆ. ಸಂಡೂರಿನ ಈಶಾನ್ಯದಲ್ಲಿ ಬಳ್ಳಾರಿ-ಹೊಸಪೇಟೆ ರಾಜ್ಯ ಹೆದ್ದಾರಿಯ ಮಧ್ಯದಲ್ಲಿರುವ ತೋರಣಗಲ್ಲು ಬಳ್ಳಾರಿಯ ವಾಯವ್ಯಕ್ಕೆ ಸು. 28 ಕಿಮೀ ದೂರದಲ್ಲಿದೆ. ರೈಲುಮಾರ್ಗಕ್ಕೆ ಹತ್ತಿರವಿರುವ ಈ ಊರಿನ ಬಳಿ ಇರುವ ವಿಜಯನಗರ ಉಕ್ಕಿನ ಕಾರ್ಖಾನೆಯಿಂದಾಗಿ ಈ ಊರು ಒಂದು ಕೈಗಾರಿಕಾ ನಗರವಾಗಿ ಬೆಳೆದು ಅಭಿವೃದ್ಧಿಯಾಗಿದೆ.

	ಸಂಡೂರು ಈ ತಾಲ್ಲೂಕಿನ ಆಡಳಿತಕೇಂದ್ರ ಹಾಗೂ ಮುಖ್ಯ ಪಟ್ಟಣ. ಬಳ್ಳಾರಿಯ ಪಶ್ಚಿಮಕ್ಕೆ ಸು. 48 ಕಿಮೀ ದೂರದಲ್ಲಿ ಬಳ್ಳಾರಿ-ಹೊಸಪೇಟೆ, ಬಳ್ಳಾರಿ-ಕೂಡ್ಲಿಗಿ ಮಾರ್ಗ ಮಧ್ಯದಲ್ಲಿದೆ. ಜನಸಂಖ್ಯೆ 34,156. ಹಿಂದೆ ಇದು ಸಂಡೂರು ಸಂಸ್ಥಾನದ ರಾಜಧಾನಿಯಾಗಿತ್ತು. ರಾಮದುರ್ಗ ಮತ್ತು ಈಶಾನ್ಯ ಬೆಟ್ಟಸಾಲುಗಳು ಒಂದು ಕಡೆ, ದೋಣಿಮಲೈ ಬೆಟ್ಟಸಾಲುಗಳು ಮತ್ತೊಂದೆಡೆ. ಈ ಎರಡೂ ಬೆಟ್ಟಸಾಲುಗಳ ಕಣಿವೆಯ ಮಧ್ಯದಲ್ಲಿರುವ ಸಂಡೂರು ಸುಂದರ ಪ್ರಾಕೃತಿಕ ಹಿನ್ನೆಲೆಯಿಂದ ಕೂಡಿದೆ. ಊರಿನ ಪೂರ್ವ ಹಾಗೂ ಪಶ್ಚಿಮ ಎರಡೂ ಕಡೆಗಳಲ್ಲೂ ಗಗನಚುಂಬಿ ಗಿರಿಶಿಖರಗಳಿವೆ. ಕುಮಾರಸ್ವಾಮಿ ಬೆಟ್ಟದ ಮೇಲೆ ಕಾರ್ತಿಕೇಯನೆಂದು ಪ್ರಸಿದ್ಧನಾದ ಕುಮಾರಸ್ವಾಮಿಯ ಭವ್ಯ ದೇವಾಲಯವಿದೆ. ಈ ನಗರದ ಸುತ್ತಮುತ್ತಲಿನ ಬೆಟ್ಟಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ ಕಾಡುಗಳಿವೆ. ಧಾರವಾಡ ವಿನ್ಯಾಸಕ್ಕೆ ಸೇರಿದ ಅಗ್ನಿಶಿಲೆಗಳು ನಗರದ ಸುತ್ತಮುತ್ತ ಹರಡಿವೆ. ದೋಣಿಮಲೈ ಬೆಟ್ಟಸಾಲುಗಳಲ್ಲಿ ಹೆಚ್ಚಿನ ಕಬ್ಬಿಣಾಂಶವುಳ್ಳ ಕಬ್ಬಿಣದ ಅದುರು ದೊರೆಯುವುದು. ಇಲ್ಲಿ ಫೆರ್ರೋಮ್ಯಾಂಗನೀಸ್ ಕಾರ್ಖಾನೆ ಇದೆ. ಈ ಸ್ಥಳವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಲು ಪ್ರಯತ್ನಗಳಾಗುತ್ತಿವೆ.	
						
	(ಕೆ.ಆರ್.ಆರ್.)

	ಸಂಡೂರು ಪಟ್ಟಣಕ್ಕೆ ತಾರಾನಗರದ ಬಳಿಯ ಭೀಮನಗಂಡಿ, ಯಶವಂತನಗರದ ಕಡೆ ಇರುವ ಓಬಳಗಂಡಿ ಮತ್ತು ವೆಂಕಟಗಿರಿ ಕಣಿವೆಗಳ ಮುಖಾಂತರ ಪ್ರವೇಶವುಂಟು. ಸಂದು ಊರು ಸಂಡೂರು ಆಯಿತೆಂದು ಪ್ರತೀತಿ. ಹಿಂದೆ ಈ ಪಟ್ಟಣವನ್ನು ಸ್ಕಂದಪುರಿ ಎಂದು ಕರೆಯುತ್ತಿದ್ದರಂತೆ. ಇಲ್ಲಿ ಹೈದರ್‍ಅಲಿ ಕಟ್ಟಿಸಿದ ಕೋಟೆಯ ಅವಶೇಷ ವಿದ್ದು, ಅದನ್ನು ಕೃಷ್ಣಾನಗರ ಕೋಟೆ ಎಂದು ಕರೆಯುವರು. ಇದರ ಆಚೆ ಭೀಮತೀರ್ಥ ಮತ್ತು ತಾರಾನಗರಕ್ಕೆ ಸ್ವಲ್ಪದೂರದಲ್ಲಿರುವ ಗ್ರಾಮದ ಬಳಿ ಭೈರವತೀರ್ಥವಿದೆ. ಈ ಎರಡೂ ತೀರ್ಥಗಳಿಗೆ ಬೆಟ್ಟಗಳಿಂದ ಹರಿದುಬರುವ ಝರಿ ಆಧಾರ. ಎರಡೂ ತೀರ್ಥಗಳ ಬಳಿ ದೇವಾಲಯ ವಿದೆ. ಓಬಳಗಂಡಿಯ ಕಣಿವೆಯ ಬಳಿ ನರಸಿಂಹಸ್ವಾಮಿ ದೇವಾಲಯವಿದೆ.  ಸಂಡೂರಿನಲ್ಲಿರುವ ವಿಠೋಬ ದೇವಾಲಯ ಮತ್ತು ಅರಮನೆ ಸುಂದರ ವಾದವು. ಕುಮಾರಸ್ವಾಮಿ ದೇವಾಲಯದಲ್ಲಿ ಸತಿ ಕಲ್ಲುಗಳೂ ಶಾಸನಗಳೂ ಇವೆ. ಇಲ್ಲಿರುವ ಪುರಾತನ ಪಾರ್ವತಿ ದೇವಾಲಯ ಮತ್ತು ಕುಮಾರ ಸ್ವಾಮಿ ದೇವಾಲಯಗಳೆರಡೂ ವಾಸ್ತುಶಿಲ್ಪ ದೃಷ್ಟಿಯಿಂದಲೂ ಮುಖ್ಯವಾ ದವು. ಇಲ್ಲಿ ನಾಲ್ಕು ಕಡೆಯೂ ಮೆಟ್ಟಲುಗಳಿರುವ ಅಗಸ್ತ್ಯತೀರ್ಥವಿದೆ. ಇಲ್ಲೇ ಹತ್ತಿರದಲ್ಲಿ ಹರಿಶಂಕರ ದೇವಾಲಯವಿದೆ. ಇಲ್ಲಿ ಬೆಟ್ಟದಿಂದ ಹರಿದು ಬರುವ ಜಲ, ಕೆತ್ತಿರುವ ಒಂದು ಹಸುವಿನ ಬಾಯಿಯ ಮುಖಾಂತರ ಇಲ್ಲಿನ ಕೊಳಕ್ಕೆ ಬೀಳುವುದು. ಈ ದೇವಾಲಯದ ಹಿಂದೆ ಒಂದು ಗುಹೆಯಿದೆ. ಶಿವನ ಮಗನಾದ ಕುಮಾರಸ್ವಾಮಿ ಅಗಸ್ತ್ಯ ಮಹಾಮುನಿಗಳ ಜೊತೆ ದಕ್ಷಿಣದ ಕಡೆ ಹೋಗುವ ಮಾರ್ಗಮಧ್ಯ ದಲ್ಲಿ ವಿಶ್ರಾಂತಿಗಾಗಿ ತಂಗಿದ್ದನೆಂದೂ ಸಂಡೂರು ಬೆಟ್ಟದ ಮೇಲಿದ್ದ ತಾರಕಾಸುರನೆಂಬ ರಾಕ್ಷಸನನ್ನು ಕೊಂದನೆಂದೂ ಪ್ರತೀತಿ. ಸಂಡೂರು ಅರಸರು ಇಲ್ಲಿಂದ ಆಳಿದ ಫೋರ್ಪಡೆ ವಂಶಿಕರು. ಘೋರ್ಪಡೆ ಎಂದರೆ ಮರಾಠಿ ಭಾಷೆಯಲ್ಲಿ ಉಡ ಎಂದರ್ಥ.			
		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ